ಕಡ್ಡಾಯದ ಕೋರಿಕೆ : ದೇಶರಕ್ಷಣೆಯಂಥ ಜರೂರು ಪರಿಸ್ಥಿತಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ತಮ್ಮ ಸಾರ್ವಜನಿಕ ಉಪಯೋಗಕ್ಕೆ ಅವಶ್ಯವೆನಿಸಿದ ಆಹಾರ ಪದಾರ್ಥ, ಕಚ್ಚಾ ಸಾಮಗ್ರಿ, ಶಸ್ತ್ರಾಸ್ತ್ರ, ಹಡಗು, ವಿಮಾನ ಮುಂತಾದ ಚರಸ್ಥಿರ ಸ್ವತ್ತುಗಳನ್ನು ವ್ಯಕ್ತಿ, ಸಂಘ ಅಥವಾ ಸಂಸ್ಥೆಗಳಿಂದ ಪಡೆದುಕೊಳ್ಳಲು ನೀಡಿದ ಬೇಡಿಕೆಯ ನಿರೂಪ, ಕಡ್ಡಾಯದ ಆದೇಶ (ರಿಕ್ವಿಸಿóಷನ್). ಭಾರತ ಸಂವಿಧಾನದ ಪ್ರಕಾರ ವ್ಯಕ್ತಿಗೆ ನೀಡಲಾದ ಮೂಲಭೂತ ಹಕ್ಕುಗಳ ಪೈಕಿ ಸ್ವತ್ತನ್ನು ಸಂಪಾದಿಸುವ, ಇಟ್ಟುಕೊಳ್ಳುವ, ಮಾರುವ ಹಕ್ಕೂ ಒಂದು. 

ಕಡ್ಡಾಯ ಕೋರಿಕೆಯಿಂದ ಈ ಹಕ್ಕಿನ ಉಲ್ಲಂಘನೆಯಾಗುವುದಾದರೂ ಜರೂರು ಪರಿಸ್ಥಿತಿಯಲ್ಲಿ ಇದು ಕಾನೂನುಬದ್ಧವೆನಿಸುತ್ತದೆ. ಸ್ವತ್ತಿನ ಕಡ್ಡಾಯ ಕೋರಿಕೆಗೂ ವಶೀಕರಣಕ್ಕೂ (ಅಕ್ವಿಸಿಷನ್) ಒಂದು ವ್ಯತ್ಯಾಸವುಂಟು. ಕಡ್ಡಾಯದ ಕೋರಿಕೆಯಲ್ಲಿ ಸ್ವತ್ತಿನ ಒಡೆತನದ ಹಕ್ಕನ್ನು ಸರ್ಕಾರಕ್ಕೆ ಬಿಟ್ಟುಕೊಡದೆ ಆಸ್ತಿಯ ಸ್ವಾಧೀನ ಮತ್ತು ಅನುಭೋಗಗಳನ್ನು ಮಾತ್ರ ವರ್ಗಾಯಿಸಬಹುದು. ಆದರೆ ವಶೀಕರಣದಲ್ಲಿ ಪರಿಹಾರ ಧನವನ್ನು ಪಡೆದು ಸ್ವತ್ತಿನ ಸಕಲ ಹಕ್ಕುಗಳನ್ನೂ ಸರ್ಕಾರದ ಹೆಸರಿಗೆ ವರ್ಗಾಯಿಸಬೇಕಾಗುತ್ತದೆ.    (ಬಿ.ಪಿ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ